ಕಾರ್ಟೂನು ರಚಿಸೋದು ಹೇಗೆ? ಹಲವು ಯುವ ಮಿತ್ರರು ಈ ಪ್ರಶ್ನೆಯನ್ನು ಕೇಳಿದಾಗೆಲ್ಲ ನನಗೆ ನನ್ನ ಶಾಲಾ-ಕಾಲೇಜು ದಿನಗಳು ನೆನಪಾಗುತ್ತವೆ. ಆ ದಿನಗಳಲ್ಲಿ ಇಂಟರ್ನೆಟ್ ಇದ್ದಿರಲಿಲ್ಲ.ಈಗಿನಂತೆ ಕಾರ್ಟೂನಿಸ್ಟರೂ ಕೈಗೆ ಸಿಗುತ್ತಿರಲಿಲ್ಲ. ಅಂತಹ ದಿನಗಳಲ್ಲಿ ಕೆಲವು ಕಾರ್ಟೂನಿಸ್ಟರ ಅಪರೂಪದ ಸಂದರ್ಶನ-ಲೇಖನಗಳಲ್ಲಿ ಅಲ್ಲಲ್ಲಿ ಚದುರಿದ ಮಾಹಿತಿಯೇ ನನ್ನಂತವರ ಹಲವರ ಪಾಲಿಗೆ ಟ್ಯುಟೋರಿಯಲ್ಸ್! ಇಂದಿಗೂ ನೆನಪಿದೆ, ನಾನು ಹತ್ತಾರೂ ವ್ಯಂಗ್ಯಚಿತ್ರಕಾರರಿಗೆ ಮಾಹಿತಿಗಾಗಿ ಪೋಸ್ಟ್-ಕಾರ್ಡ್ ಬರೆಯುತ್ತಿದೆ. ಕೆಲವರು ಪ್ರತಿಕ್ರಿಯಿಸುತ್ತಿದ್ದರು. ಕನ್ನಡದಲ್ಲಿ ನಿರಂತರವಾಗಿ ಕಾರ್ಟೂನು ಬರೆಯುತ್ತಿದ್ದ ಬಿ. ಮಂಜು ಎನ್ನುವವರು ನನ್ನ ಪ್ರಶ್ನೆಗಳಿಗೆ ಬಹಳ ತಾಳ್ಮೆಯಿಂದ ಉದ್ದದ ಉತ್ತರ ಬರೆದಿದ್ದು ಇನ್ನೂ ನೆನಪಿದೆ. ಆ ಮಾಹಿತಿ ನನಗೆ ಬಹಳ ಉಪಯುಕ್ತವೆನಿಸಿತು.

ಇಂದು ನನಗೆ ತಿಳಿದ ಮಟ್ಟಿಗೆ ಕಾರ್ಟೂನಾಸಕ್ತರ ಪ್ರಶ್ನೆ-ಸಂದೇಹಗಳಿಗೆ ಉತ್ತರ ನೀಡೋಕೆ ಹೆಮ್ಮೆಯೆನಿಸುತ್ತೆ.

ಇದು ಕೇವಲ ನನ್ನ ಕಾರ್ಟೂನು ರಚಿಸುವ ವಿಧಾನವಷ್ಟೇ. ಹಲವು ವ್ಯಂಗ್ಯಚಿತ್ರಕಾರರು ತಮ್ಮದೇ ರೀತಿಯ ವಿಧಾನವನ್ನು ರೂಢಿಸಿಕೊಂಡಿರುತ್ತಾರೆ.

ಈ ಪೋಸ್ಟಿನಲ್ಲಿ ಕೇವಲ ಕಾರ್ಟೂನು ರಚಿಸುವ ಟೆಕ್ನಿಕಲ್ ವಿಧಾನವನ್ನಷ್ಟೇ ಹೇಳಬಲ್ಲೆ. ನಿಮಗೆಲ್ಲ ತಿಳಿದಿರುವಂತೆ, ಸಂಪಾದಕೀಯ ಕಾರ್ಟೂನು ಅಂದ್ರೆ ಬರೀ ಚಿತ್ರವಲ್ಲ.

ನನ್ನ ಪ್ರಕಾರ ಅದು ಚಿತ್ರಕ್ಕಿಂತ ಹೆಚ್ಚಾಗಿ ಐಡಿಯಾ! ಆದ್ದರಿಂದ ಐಡಿಯಾ ಹೇಗೆ ಹುಡುಕೋದು ಅನ್ನೋ ಪ್ರಶ್ನೆಗೆ ಉತ್ತರ ಯಾವ ಟ್ಯುಟೋರಿಯಲ್ಸ್ ಹಿಡಿತಕ್ಕೆ ಸಿಗದು.

ನಿಮ್ಮತ್ರ ಒಂದು ಐಡಿಯಾ ಇದೆ ಅಂದ್ಕೊಳ್ಳಿ. ಅದನ್ನು ನಾನು ಹೇಗೆ ಕಾರ್ಟೂನ್ ರೂಪಕ್ಕೆ ಇಳಿಸುತ್ತೇನೆ ಅನ್ನೋದನ್ನು ಹಂಚಿಕೊಳ್ಳುತ್ತೇನೆ.

ನಿಮಗೆ ಮುಖ್ಯವಾಗಿ ಬೇಕಾದ್ದು ಪೇಪರ್, ಪೆನ್ಸಿಲ್, ಪೆನ್, ಇಂಕ್, ಬ್ರಷ್ ಇತ್ಯಾದಿ. ಅದನ್ನೇ ಬಳಸಿ ನಾನು ಕಾರ್ಟೂನು ಬರೆಯುತ್ತಿದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ನಾನು ಡಿಜಿಟಲ್ ಆಗಿ Wacom-Cintiq ಅನ್ನೋ ಉಪಕರಣವನ್ನು ಬಳಸ್ತಿದ್ದೀನಿ. ಇದರ ಉಪಯೋಗವೆಂದ್ರೆ ಪೇಪರ್ ಬೇಕಾಗಿಲ್ಲ. ನೇರವಾಗಿ ಕಂಪ್ಯೂಟರ್ ಮೇಲೇನೆ ಚಿತ್ರ ಬಿಡಿಸಬಹುದು. ಸಮಯದ ಉಳಿತಾಯ ಹಾಗೂ ತಪ್ಪುಗಳನ್ನು ಸರಿಪಡಿಸಿಕೊಳ್ಳೋದು ಸುಲಭ.

ಈ ಗ್ರಾಫಿಕ್ಸ್ ಟ್ಯಾಬ್ಲೆಟ್ ಬಳಸಿದಾಗಲೂ ನಾನು ಶುರು ಮಾಡೋದು ಪೆನ್ಸಿಲ್ ಸ್ಕೆಚ್ ಮೂಲಕವೇ. ಫೋಟೋಶಾಪ್ ನಲ್ಲಿ ನಿಮಗೆ ಬೇಕಾದಷ್ಟು ಬ್ರುಶುಗಳ ಸವಲತ್ತಿದೆ. ನಿಮಗೆ ಇಷ್ಟವಾಗುವ ಬ್ರಷ್ ಆಯ್ದುಕೊಂಡು ಚಿತ್ರ ಬಿಡಿಸಬಹುದು.

 

ನನ್ನ ಮನದಲ್ಲಿ ಕಾರ್ಟೂನು ಲೇಔಟ್-ಪ್ಲಾನ್ ತಯಾರಾದ ಬಳಿಕ ಪೆನ್ಸಿಲ್ ಬ್ರಷ್ ಬಳಸಿ ಕರಡು ಸ್ಕೆಚ್ ಮಾಡ್ತೀನಿ. ಇದು ಕೆಲವೊಮ್ಮೆ ಎಷ್ಟು ಕರಡು ಅಂದ್ರೆ ನನ್ನನ್ನು ಬಿಟ್ರೆ ಬೇರಾರಿಗೂ ಇಲ್ಲಿ ಯಾವ ಕ್ಯಾರೆಕ್ಟರ್-ಗಳ ಪುರಾವೆ ಕಾಣೋಲ್ಲ!

ಇದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಂಪಾ ಅವರ ರಾಜಕೀಯ-ಮಾತಿನ ಬಗ್ಗೆ ಕಾರ್ಟೂನು. ಇಲ್ಲಿ ಚಂಪಾ ಕ್ಯಾರಿಕೇಚರ್ ಇದೆ. ಜೊತೆಗೆ ನಮ್ಮ ಸಿಎಂ ಸಿದ್ದರಾಮಯ್ಯ ಅವರ ಕ್ಯಾರಿಕೇಚರ್ ಇದೆ. ಸಿದ್ರಾಮಣ್ಣನ ಚಿತ್ರ ಮನಃಪಟಲದಲ್ಲಿದೆ. ಆದ್ದರಿಂದ ಇವರನ್ನು ಫೋಟೋ ನೋಡಿ ಬಿಡಿಸೋ ಅಗತ್ಯ ಇಲ್ಲ. ಆದ್ರೆ ಚಂಪಾ ಕಾರ್ಟೂನಿಗೆ ಅಪರೂಪದ ವ್ಯಕ್ತಿ. ಆದ್ರಿಂದ ಅವರ ಫೋಟೋ ಇಟ್ಕೊಂಡು ಚಿತ್ರ ಬಿಡಿಸಬೇಕಾಯ್ತು.

ಒಮ್ಮೆ ರಫ್ ಚಿತ್ರ ತಯಾರಾದ ಮೇಲೆ, ಮುಂದೆ ಇಂಕ್ ಹಚ್ಚೋ ಕೆಲಸ. ಇಲ್ಲಿ ಕೂಡ ನಿಮಗೆ ಹೊಂದುವ ಫೋಟೋಶಾಪ್ ಬ್ರಷ್ ಬಳಸಿ. ಸಾವಿರಾರೂ ಬ್ರಷ್-ಗಳು ಫೋಟೋಶಾಪ್ನಲ್ಲಿವೆ. ಅದು ಕೆಲವೊಮ್ಮೆ ಹೊರೆಯೂ ಹೌದು!

ಕಾರ್ಟೂನಿನ ಆಳಕ್ಕೆ, ಡೀಟೇಲ್ಸ್ ಅಗತ್ಯಕ್ಕೆ ಅನುಗುಣವಾಗಿ ನಾನು ಬ್ರಷ್ ಬಳಸ್ತೀನಿ. ಇಂಕ್ ಮಾಡುವಾಗ ಮತ್ತೊಮ್ಮೆ ಚಂಪಾ ಅವರ ಫೋಟೋ ನೋಡ್ಕೊಂಡು ಚಿತ್ರ ಬಿಡಿಸಬೇಕಾಯ್ತು.

ಇಂಕ್ ತುಂಬಿದ ನಂತರ ನಿಮ್ಮ ರಫ್ ಪೆನ್ಸಿಲ್ ಸ್ಕೆಚ್ ಅಗತ್ಯವಿಲ್ಲ. ಅದನ್ನು ಡಿಲೀಟ್ ಮಾಡಿ. ಇನ್ನು ಬಣ್ಣ ತುಂಬಾ ಕೆಲಸ. ಇಲ್ಲಿ ಕೂಡ ಮಿಲಿಯನ್ಗಟ್ಟಳೆ ಬಣ್ಣಗಳಿವೆ. ಬಣ್ಣದ ಆಯ್ಕೆ ಕಾರ್ಟೂನಿನ ಮೂಡಿನ ಮೇಲೆ ಕೂಡ ಅವಲಂಬಿಸುತ್ತೆ. ಬ್ರಷ್ ಕೂಡ ನಿಮ್ಮ ಶೈಲಿಗೆ ಒಗ್ಗುವಂತಹ ರೀತಿಯಲ್ಲೇ ಆಯ್ದುಕೊಳ್ಳಿ. ಈ ಡಿಜಿಟಲ್ ಕ್ಯಾನ್ವಾಸ್ ಒಂಥರಾ ಆಟದ ಮೈದಾನ ಇದ್ದಂಗೆ. ಕಲಿಯೋದು ಮುಗಿಯೋಲ್ಲ. ಪ್ರಯೋಗ ಮಾಡೋಕೆ ಹಿಂಜರಿಯಬೇಡಿ.

ಕಲರ್ ಮಾಡೋವಾಗ ನೆರಳು-ಬೆಳಕು ಹಾಗೂ ಹೈಲೈಟ್ಸ್ ಬಳಸಿ ಕಾರ್ಟೂನಿಗೆ ಜೀವ ತುಂಬಬಹುದು.

ಈಗ ಕಾರ್ಟೂನು ತಯಾರಾಗಿದೆ!

ಇದು ಕೇವಲ ಶುರುವಾತಿನ ಪಾಠವಷ್ಟೇ. ಕಾರ್ಟೂನು ಅಂದ್ರೆ ಬರಿ ಚಿತ್ರವಲ್ಲ, ಸಾಫ್ಟ್-ವೆರ್  ಕೂಡ ಅಲ್ಲ. ಇದನ್ನು ಪ್ರತಿ ಕಾರ್ಟೂನು ಮಾಡುವಾಗ ನೆನಪಿಡಿ. ನಿಮ್ಮ ಓದು, ನಿಮ್ಮ ಆಸಕ್ತಿ, ವಿಚಾರಧಾರೆ, ನಿಮ್ಮ ಕಲ್ಪನೆ, ನಿಮ್ಮ ಐಡಿಯಾಗಳು, ನಿಮ್ಮ ಹಾಸ್ಯಪ್ರಜ್ಞೆ   ಇತ್ಯಾದಿಗಳಷ್ಟೇ ನಿಮ್ಮ ಕಾರ್ಟೂನುಗಳನ್ನು ಎತ್ತರೆತ್ತರಕೆ ಕೊಂಡೊಯ್ಯಬಲ್ಲವು. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ.

Leave a comment

You may also like

One response to “ನಾನು ಕಾರ್ಟೂನು ರಚಿಸುವ ವಿಧಾನ ಹೇಗೆ?”